
ದಕ್ಷಿಣ ಕನ್ನಡದ ಉಜಿರೆಯಲ್ಲಿರುವ ಎಂಜಿನಿಯರಿಂಗ್ ಕಾಲೇಜು ಆವರಣಕ್ಕೆ ಭಾನುವಾರ ಬೆಳಗ್ಗೆ 6 ಗಂಟೆಗೆ ಕಾಡಾನೆಯೊಂದು ನುಗ್ಗಿದ್ದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು.
ಬೆಳ್ತಂಗಡಿ ಅರಣ್ಯ ಇಲಾಖೆ ಮತ್ತು ಮಂಗಳೂರು ಆನೆ ಕಾರ್ಯಪಡೆಯ 20ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆನೆಯನ್ನು ಚರ್ಮಾಡಿ ಅರಣ್ಯದತ್ತ ಓಡಿಸಿದ್ದಾರೆ.
ಉಪ್ಪಿನಂಗಡಿ ಭಾಗದಿಂದ ಬಂದಿರಬಹುದಾದ ಈ ಆನೆಯು ಜನವಸತಿ ಪ್ರದೇಶಕ್ಕೆ ಮರಳದಂತೆ ಅರಣ್ಯ ಇಲಾಖೆಯು ನಿರಂತರ ನಿಗಾ ವಹಿಸಿದೆ ಎಂದು ವಲಯ ಅರಣ್ಯಾಧಿಕಾರಿ ಮಹೇಶ್ ದೇವಾಡಿಗ ತಿಳಿಸಿದ್ದಾರೆ.