
ಎಲ್ನಿನೊ ಪರಿಣಾಮ ಉಂಟಾಗಿರುವ ಬರಗಾಲದಿಂದ ಚಿಂಚೋಳಿ ತಾಲ್ಲೂಕಿನ 21 ಸಣ್ಣ ನೀರಾವರಿ ಕೆರೆಗಳ ಪೈಕಿ 19 ಕೆರೆಗಳು ನೀರಿಲ್ಲದೆ ಖಾಲಿಯಾಗಿದ್ದು, ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ.
ತಾಲ್ಲೂಕಿನಲ್ಲಿ ವಾರ್ಷಿಕ ಸರಾಸರಿಗಿಂತಲೂ ಶೇ. 50ರಷ್ಟು ಮಳೆ ಕೊರತೆಯಿದ್ದು, ನದಿ ಮತ್ತು ಹಳ್ಳಗಳು ಬತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಖಾಲಿಯಾಗಿರುವ ಕೆರೆಗಳ ಅಂಗಳದಿಂದ ಹೂಳು ತೆಗೆಯಲು ಇದು ಸಕಾಲವಾಗಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನ ಒದಗಿಸಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಹೂಳೆತ್ತಬೇಕು ಎಂದು ರೈತ ಸಂಘ ಆಗ್ರಹಿಸಿದೆ.