
ಚುನಾವಣಾ ಆಯೋಗದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನವೆಂಬರ್ 1ರಂದು ರಾಮಲೀಲಾ ಮೈದಾನದಲ್ಲಿ ಆಯೋಜಿಸಿರುವ ಪ್ರತಿಭಟನೆಯನ್ನು ಮುಂದೂಡುವಂತೆ ಕೋರಿ ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.
ದೀಪಾವಳಿ ಹಬ್ಬದ ಶಾಪಿಂಗ್ ಭರಾಟೆಯ ಸಮಯದಲ್ಲಿ ಈ ರ್ಯಾಲಿ ನಡೆದರೆ ರಾಜಧಾನಿಯ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳಲ್ಲಿ ಸುಮಾರು 10,000 ಕೋಟಿ ರೂ. ವಹಿವಾಟು ನಷ್ಟವಾಗುವ ಗಂಭೀರ ಅಪಾಯವಿದೆ ಎಂದು ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.
ಶಾಂತಿಯುತ ಪ್ರತಿಭಟನೆ ನಡೆಸುವುದು ಸಂವಿಧಾನಬದ್ಧ ಹಕ್ಕಾದರೂ ಅದು ಸಾರ್ವಜನಿಕರ ಜೀವನೋಪಾಯದ ಹಕ್ಕನ್ನು ಕಸಿದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಎಚ್ಚರಿಸಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.