
ದಕ್ಷಿಣ ಪೆಸಿಫಿಕ್ ಮಹಾಸಾಗರದ ವನವಾಟು ದ್ವೀಪಗಳಲ್ಲಿ ಶನಿವಾರ ಮುಂಜಾನೆ ಕೆಲವೇ ನಿಮಿಷಗಳ ಅಂತರದಲ್ಲಿ ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 7.2, 6.9 ಹಾಗೂ 6.3 ತೀವ್ರತೆಯ ಮೂರು ಪ್ರಬಲ ಭೂಕಂಪಗಳು ಸಂಭವಿಸಿವೆ.
ಮೊದಲ ಹಾಗೂ ಅತ್ಯಂತ ಪ್ರಬಲವಾದ 7.2 ತೀವ್ರತೆಯ ಭೂಕಂಪವು ಭಾರತೀಯ ಕಾಲಮಾನ ಬೆಳಗ್ಗೆ ಸುಮಾರು 8:12 ಕ್ಕೆ ಟೋರ್ಬಾ ಪ್ರಾಂತ್ಯದ ರಾಜಧಾನಿ ಸೋಲಾ ಪಟ್ಟಣದ ಪಶ್ಚಿಮಕ್ಕೆ 200 ಕಿ.ಮೀ ದೂರದಲ್ಲಿ ಸಮುದ್ರದ ಆಳದಲ್ಲಿ ದಾಖಲಾಗಿದೆ.
ಪ್ರಬಲ ಕಂಪನದ ಬೆನ್ನಲ್ಲೇ ಕರಾವಳಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ಈವರೆಗೆ ಯಾವುದೇ ದೊಡ್ಡ ಅಲೆಗಳು ಅಪ್ಪಳಿಸಿರುವ ಅಥವಾ ಸಾವುನೋವು ಸಂಭವಿಸಿದ ವರದಿ ಬಂದಿಲ್ಲ.