
ಮಹಾರಾಷ್ಟ್ರ ಸರ್ಕಾರವು ಕೃಷ್ಣಾ ನದಿಯಿಂದ 40 ಟಿಎಂಸಿ ಅಡಿ ನೀರನ್ನು ಭೀಮಾ ನದಿಗೆ ತಿರುಗಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇದು ಕರ್ನಾಟಕದ ಹಿತಾಸಕ್ತಿಗೆ ಗಂಭೀರ ಧಕ್ಕೆ ಉಂಟು ಮಾಡಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಆರೋಪಿಸಿದ್ದಾರೆ.
ಸುಮಾರು 19,000 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಗೆ ಮಹಾರಾಷ್ಟ್ರ ಸರ್ಕಾರ ಈಗಾಗಲೇ 24 ಕೋಟಿ ರೂ. ಮಂಜೂರು ಮಾಡಿ ಡಿಪಿಆರ್ ಸಿದ್ಧಪಡಿಸುತ್ತಿದೆ. ಈ ಕಾಮಗಾರಿಗೆ ವಿಶ್ವ ಬ್ಯಾಂಕ್ ಆರ್ಥಿಕ ನೆರವು ನೀಡುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನ್ಯಾಯಮಂಡಳಿಯ ತೀರ್ಪಿನ ಆಧಾರದ ಮೇಲೆ ಈ ಯೋಜನೆಗೆ ಕಾನೂನುಬದ್ಧ ಆಧಾರವಿದೆಯೇ ಎಂದು ಪ್ರಶ್ನಿಸಿರುವ ಸಚಿವರು, ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ನಡೆಸಿ ರಾಜ್ಯದ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.