
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ, ಗ್ರಾಮೀಣ ಭಾಗದ ಯುವಕ-ಯುವತಿಯರಿಗೂ ತಲುಪಿದಾಗ ಮಾತ್ರ ದೇಶದ ನೈಜ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಐ.ಎ.ಎಸ್. ಅವರು ಜುಲೈ 27ರಂದು ತಿಳಿಸಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ರೂರಲ್ ಶೋರ್ಸ್ AI ಕೌಶಲ್ಯ ಮತ್ತು ಅನುಭವ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನಕ್ಕೆ ಕರುಣೆ, ನೈತಿಕತೆ ಮತ್ತು ಸದ್ಗುಣಗಳ ಸ್ಪರ್ಶವಿರಬೇಕು ಎಂದರು.
ರೂರಲ್ ಶೋರ್ಸ್ ಸಂಸ್ಥೆಯು ಕಳೆದ 18 ವರ್ಷಗಳಿಂದ ಸುಮಾರು 30,000ಕ್ಕೂ ಹೆಚ್ಚು ಗ್ರಾಮೀಣ ಯುವಕ-ಯುವತಿಯರಿಗೆ ತರಬೇತಿ ಹಾಗೂ ಉದ್ಯೋಗಾವಕಾಶ ನೀಡಿ, ಅವರು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿದೆ ಎಂದು ಶಾಲಿನಿ ರಜನೀಶ್ ಶ್ಲಾಘಿಸಿದರು.