
ವಿಜಯನಗರ ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ತಜ್ಞರ ತಂಡ ಸೋಮವಾರ ಪ್ರವಾಸ ಕೈಗೊಳ್ಳಲಿದ್ದು, 2.71 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಕೈಕೊಟ್ಟಿರುವುದರಿಂದ ₹249 ಕೋಟಿ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಡಳಿತ ಬೇಡಿಕೆ ಸಲ್ಲಿಸಲು ಸಿದ್ಧತೆ ನಡೆಸಿದೆ.
ಜಿಲ್ಲೆಯ ಒಟ್ಟು 5.70 ಲಕ್ಷ ಹೆಕ್ಟೇರ್ ಸಾಗುವಳಿ ಯೋಗ್ಯ ಜಮೀನಿನಲ್ಲಿ 3.83 ಲಕ್ಷ ಹೆಕ್ಟೇರ್ ಒಣಭೂಮಿಯಾಗಿದೆ. ಮುಂಗಾರು ಅವಧಿಯಲ್ಲಿ 38.91 ಸೆಂ.ಮೀ ಮಳೆ ಸುರಿಯಬೇಕಿತ್ತು, ಆದರೆ 16.84 ಸೆಂ.ಮೀ ಮಾತ್ರ ಮಳೆಯಾಗಿದ್ದು, ಎಲ್ಲಾ ಆರೂ ತಾಲ್ಲೂಕುಗಳು ತೀವ್ರ ಬರಪೀಡಿತವಾಗಿವೆ.
ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ್ ಅವರ ಪ್ರಕಾರ ಜಿಲ್ಲೆಯಲ್ಲಿ ಮೆಕ್ಕೆಜೋಳ, ರಾಗಿ, ಹೈಬ್ರಿಡ್ ಜೋಳ, ನೆಲಗಡಲೆ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ.