
ಭಯೋತ್ಪಾದನೆಯ ನಿರಂತರ ಬೆದರಿಕೆಯಿಂದಾಗಿ ಭಾರತದ ತಕ್ಷಣದ ಗಮನ ಪಾಕಿಸ್ತಾನದ ಮೇಲಿದ್ದರೂ, ಭವಿಷ್ಯದಲ್ಲಿ ಮತ್ತು ದೀರ್ಘಾವಧಿಯಲ್ಲಿ ಚೀನಾವೇ ಭಾರತಕ್ಕೆ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ ಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಹೇಳಿದ್ದಾರೆ.
ರೂಪಾ ಪಬ್ಲಿಕೇಷನ್ಸ್ ಪ್ರಕಟಿಸಿರುವ ತಮ್ಮ ಹೊಸ ಪುಸ್ತಕ ‘ದಿ ಕ್ಯೂರಿಯಸ್ ಅಂಡ್ ದಿ ಕ್ಲಾಸಿಫೈಡ್: ಅನ್ಅರ್ಥಿಂಗ್ ಮಿಲಿಟರಿ ಮಿಥ್ಸ್ ಅಂಡ್ ಮಿಸ್ಟರೀಸ್’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯ, ಆರ್ಥಿಕತೆ ಮತ್ತು ಮಿಲಿಟರಿ ರಂಗಗಳಲ್ಲಿ ಚೀನಾ ದೊಡ್ಡ ಪೈಪೋಟಿಯಾಗಲಿದೆ ಎಂದಿದ್ದಾರೆ.
ಡಿಸೆಂಬರ್ 2019 ರಿಂದ ಏಪ್ರಿಲ್ 2022 ರವರೆಗೆ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ನರವಾಣೆ ಅವರು, ಗಡಿ ವಿವಾದಗಳನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕವೇ ಬಗೆಹರಿಸಿಕೊಳ್ಳಬೇಕು ಮತ್ತು ಯುದ್ಧವು ಯಾವಾಗಲೂ ಕೊನೆಯ ಆಯ್ಕೆಯಾಗಿರಬೇಕು ಎಂದು ಸ್ಪಷ್ಟಪಡಿಸಿದ್ದಾರೆ.