
ಐಪಿಎಲ್ 2027 ಹರಾಜಿಗೂ ಮುನ್ನ ಆಟಗಾರರ ವಿನಿಮಯ ಪ್ರಕ್ರಿಯೆ ನಡೆಯುತ್ತಿದ್ದು, ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ವರದಿಗಳು ಹೊರಬಂದಿವೆ.
ಈ ಒಪ್ಪಂದದಡಿ ಹಾರ್ದಿಕ್ ಅವರನ್ನು ಪಡೆದುಕೊಳ್ಳಲಿರುವ ಪಂಜಾಬ್ ತಂಡಕ್ಕೆ ಪ್ರತಿಯಾಗಿ ಭಾರತದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ವಿಷ್ಣು ವಿನೋದ್ ಅವರನ್ನು ಮುಂಬೈ ಪಡೆದುಕೊಳ್ಳುವ ಸಾಧ್ಯತೆಯಿದೆ.
ಉಭಯ ತಂಡಗಳ ಆಡಳಿತ ಮಂಡಳಿಗಳು ಒಪ್ಪಿಗೆ ಸೂಚಿಸಿದ್ದು, ನವೆಂಬರ್ 17ರ ರಿಟೆನ್ಷನ್ ಗಡುವಿನ ಒಳಗಾಗಿ ಅಥವಾ ಈ ವಾರದ ಕೊನೆಯಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.