
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಾಗಿ, ಕೊಪ್ಪ, ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಧರೆ ಕುಸಿತದಂತಹ ಅವಾಂತರಗಳು ಸಂಭವಿಸುತ್ತಿವೆ.
ಶೃಂಗೇರಿ ತಾಲೂಕಿನ ಕಡೇಮನೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೃಹತ್ ಗುಡ್ಡ ಕುಸಿದಿದ್ದು, ಕಾರ್ಕಳ-ಮಂಗಳೂರು-ಶೃಂಗೇರಿ ನಡುವಿನ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಕೊಪ್ಪ ತಾಲೂಕಿನ ಅಂಬಳಿಕೆ ಗ್ರಾಮದಲ್ಲಿ ಪವನ್ ಎಂಬುವವರ ಮನೆಯ ಹಿಂಭಾಗದ ಧರೆ ಕುಸಿದಿದ್ದು, ಮಣ್ಣು ಮಿಶ್ರಿತ ನೀರು ಮನೆಗೆ ನುಗ್ಗಿದ್ದರಿಂದ ಕುಟುಂಬವು ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿದೆ.