
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನ್ನೂರ ನಾಯಕ (65) ಎಂಬ ರೈತರನ್ನು ಕಾಡಾನೆ ತುಳಿದು ಸಾಯಿಸಿದೆ.
ಪದೇ ಪದೇ ಕಾಡಾನೆಗಳ ಉಪಟಳದಿಂದ ಜನಜೀವನ ಹೈರಾಣಾಗಿದೆ. ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದ್ದು, ಸೋಲಾರ್ ಫೆನ್ಸಿಂಗ್ ಹಾಗೂ ಬ್ಯಾರಿಕೇಡ್ ಅಳವಡಿಕೆಗೆ ಈ ಹಿಂದೆ ಮಾಡಿದ್ದ ಮನವಿಯನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅರಣ್ಯಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು, ಕಾಡಾನೆಗಳು ನಾಡಿಗೆ ನುಗ್ಗುವುದನ್ನು ತಡೆಯಲು ಕೂಡಲೇ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.