
ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಮಹಿಳೆಯರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ಚನ್ನಪಟ್ಟಣದ ಪೊಲೀಸ್ ಭವನದಲ್ಲಿಟ್ಟ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.
ಬೈರಮಂಗಲದ ರೈತರು ಕಳೆದ 18 ತಿಂಗಳಿಂದ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದರೂ, ಮಹಿಳೆಯರನ್ನು ರಸ್ತೆಯಲ್ಲಿ ಎಳೆದಾಡಿ ಹಲ್ಲೆ ಮಾಡಲಾಗಿದೆ ಎಂದು ಧರಣಿನಿರತ ಮಹಿಳೆಯರು ಕುಮಾರಸ್ವಾಮಿ ಎದುರು ಕಣ್ಣೀರಿಟ್ಟರು.
ಕುಮಾರಸ್ವಾಮಿ ಅವರು ಎಸ್.ಪಿ. ರೋಹನ್ ಜಗದೀಶ್ ಹಾಗೂ ಡಿಐಜಿಪಿ ಗಿರೀಶ್ ಅವರಿಗೆ ದೂರವಾಣಿ ಕರೆ ಮಾಡಿ ಪೊಲೀಸರನ್ನು ಸಸ್ಪೆಂಡ್ ಮಾಡುವಂತೆ ಎಚ್ಚರಿಕೆ ನೀಡಿದ ಬಳಿಕ, ರೈತರಿಗೆ ಬಾಳೆಹಣ್ಣು ತಿನ್ನಿಸಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.