
ರಾಜ್ಯದಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಮೂರು ವರ್ಷಗಳಲ್ಲಿ 800 ಕೋಟಿ ರೂ. ಹಣ ದುರ್ಬಳಕೆಯಾಗಿದ್ದು, ನೂರಾರು ಕೋಟಿ ಹಣ ದೆಹಲಿ ಹಾಗೂ ಕೇರಳಕ್ಕೆ ವರ್ಗಾವಣೆಯಾಗಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದ 27,13,000 ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಒಬ್ಬ ಕಾರ್ಮಿಕನಿಗೆ 2,950 ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಶಿವಮೊಗ್ಗದಲ್ಲಿ ಮಾತನಾಡಿದ ಅವರು ಎಂಟು ಏಜೆನ್ಸಿಗಳ ಮೂಲಕ ಈ ಹಗರಣ ನಡೆದಿದೆ ಎಂದಿದ್ದಾರೆ.
ಈ ಪ್ರಕರಣವನ್ನು ಸಿಬಿಐ ಅಥವಾ ಇ.ಡಿ ತನಿಖೆಗೆ ಒಪ್ಪಿಸಬೇಕು ಹಾಗೂ ನೈತಿಕ ಹೊಣೆ ಹೊತ್ತು ಸಚಿವ ಸಂತೋಷ್ ಲಾಡ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ಅವರು, ಇಲ್ಲದಿದ್ದರೆ ಬಿಜೆಪಿ ದೊಡ್ಡ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.