
ಉತ್ತರ ಪ್ರದೇಶದ ಕಾನ್ಪುರದಲ್ಲಿ ಗುರುವಾರ ಸಂಭವಿಸಿದ ತರಬೇತಿ ವಿಮಾನ ಅಪಘಾತದಲ್ಲಿ ಕರ್ನಾಟಕದ ಅಭಿಷೇಕ್ ಪೂಜಾರಿ ಮತ್ತು ಗುಜರಾತ್ ಮೂಲದ ಸಚಿನ್ ಭಾಟಿಯಾ ಎಂಬ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.
ಬೆಳಗ್ಗೆ 11.30ಕ್ಕೆ ಹಾರಾಟ ಆರಂಭಿಸಿದ್ದ ಅವಳಿ ಎಂಜಿನ್‌ನ ಟೆಕ್ನಮ್ ವಿಮಾನ, 20 ನಿಮಿಷಗಳ ಬಳಿಕ ಗಂಗಾ ಬ್ಯಾರೇಜ್ ಪ್ರದೇಶದ ಹೊಲವೊಂದಕ್ಕೆ ಅಪ್ಪಳಿಸಿ ಸಂಪೂರ್ಣ ಜಖಂಗೊಂಡಿದೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತಾಂತ್ರಿಕ ತನಿಖೆಗೆ ಆದೇಶಿಸಿದ್ದು, ಅಪಘಾತಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ.