
ಸಕಲೇಶಪುರದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಗೌರವಯುತವಾಗಿ ಲಂಚ ಕೊಡಿ ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವರು, ಮಾತಿನ ಬರದಲ್ಲಿ ಬಾಯ್ತಪ್ಪಿ ಹಾಗೆ ಬಂದಿದೆಯೆ ಹೊರತು, ತಾನು ಆರಂಭದಲ್ಲೇ ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ಲಂಚ ಕೊಡಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಜನಪರ ಕೆಲಸಗಳನ್ನು ಸಹಿಸದ ವಿರೋಧ ಪಕ್ಷಗಳು ತಮ್ಮ ವರ್ಚಸ್ಸನ್ನು ಹಾಳುಮಾಡಲು ದುರುದ್ದೇಶಪೂರಿತವಾಗಿ ವಿಡಿಯೋವನ್ನು ತಿರುಚಿ ಅಪಪ್ರಚಾರ ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.