
ಮೈಸೂರಿನಲ್ಲಿ 14 ವರ್ಷದ ಬಾಲಕ ಕಾರು ಚಲಾಯಿಸಿ ನಡೆಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಪ್ರಕರಣದಲ್ಲಿ, ಅಪರಾಧ ಮುಕ್ತಗೊಳಿಸುವಂತೆ ಕೋರಿ ಬಾಲಕನ ತಂದೆ ನದೀಮ್-ಉರ್-ರೆಹಮಾನ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಳ್ಳಿಹಾಕಿದೆ.
ಮಕ್ಕಳ ಅಪ್ರಾಪ್ತತೆಯನ್ನು ಮುಂದಿಟ್ಟು ಪಾಲಕರು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ತಂದೆಯ ವಿರುದ್ಧದ ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪದ ವಿಚಾರಣೆ ಮುಂದುವರಿಯಲಿದೆ ಎಂದಿದೆ.
ಕರ್ನಾಟಕದಲ್ಲಿ ಅಪ್ರಾಪ್ತರು ನಡೆಸುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, 2025-26ರಲ್ಲಿ ರಾಜ್ಯದಲ್ಲಿ ಅಪ್ರಾಪ್ತರಿಂದಲೇ 751 ಅಪಘಾತಗಳು ಸಂಭವಿಸಿವೆ ಎಂದು ತಿಳಿಸಿದೆ.