
ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಕ್ಷಿಣ ಭಾರತದ ರಾಜ್ಯಗಳಿಗೆ ನ್ಯಾಯಯುತ ತೆರಿಗೆ ಪಾಲು ನೀಡುವಂತೆ ಕೇಂದ್ರವನ್ನು ಒತ್ತಾಯಿಸಿದರು.
ದಕ್ಷಿಣದ 5 ರಾಜ್ಯಗಳು ದೇಶದ ಒಟ್ಟು ಜನಸಂಖ್ಯೆಯ ಶೇ. 20ರಷ್ಟಿದ್ದರೂ ಜಿಡಿಪಿಗೆ ಶೇ. 33ರಷ್ಟು ಕೊಡುಗೆ ನೀಡುತ್ತಿದ್ದು, ಕರ್ನಾಟಕವೊಂದೇ ದೇಶದ ಜಿಡಿಪಿಗೆ ಶೇ. 9ರಷ್ಟು ಕೊಡುಗೆ ನೀಡುತ್ತಿದೆ ಎಂದು ಅವರು ಅಂಕಿ-ಅಂಶಗಳನ್ನು ಮಂಡಿಸಿದರು.
15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕದ ತೆರಿಗೆ ಪಾಲು ಶೇ. 4.7ರಿಂದ ಶೇ. 3.6ಕ್ಕೆ ಇಳಿಕೆಯಾಗಿ 65,000 ಕೋಟಿ ರೂಪಾಯಿ ನಷ್ಟವಾಗಿದ್ದು, 16ನೇ ಹಣಕಾಸು ಆಯೋಗವು ಇದನ್ನು ಶೇ. 4.131ಕ್ಕೆ ಹೆಚ್ಚಿಸಿದ್ದರೂ ಸಂಪೂರ್ಣ ನ್ಯಾಯ ಸಿಕ್ಕಿಲ್ಲ ಎಂದರು.