
ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ರೂಪಿಸಿದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ. ಕೃಷ್ಣ ಅವರ ಸ್ಮರಣಾರ್ಥ ವಿಕಾಸಸೌಧದ ಆವರಣದಲ್ಲಿ ಪ್ರತಿಮೆ ಸ್ಥಾಪಿಸುವಂತೆ ಡಾ. ಕೆ. ಗೋವಿಂದರಾಜ್ ಅವರು ಸಿಎಂಗೆ ಪತ್ರ ಬರೆದಿದ್ದಾರೆ.
2004ರಲ್ಲಿ ಎಸ್.ಎಂ. ಕೃಷ್ಣ ಅವರ ದೂರದೃಷ್ಟಿಯಿಂದ ನಿರ್ಮಾಣವಾದ ವಿಕಾಸಸೌಧವು ರಾಜ್ಯದ ಆಡಳಿತ ವ್ಯವಸ್ಥೆಗೆ ಮಹತ್ವದ ಕೊಡುಗೆಯಾಗಿದ್ದು, ಅವರ ಸಾಧನೆಯನ್ನು ಗೌರವಿಸಲು ಈ ಕ್ರಮ ಅಗತ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎಸ್.ಎಂ. ಕೃಷ್ಣ ಅವರು ವಿದೇಶಾಂಗ ಸಚಿವರಾಗಿ ಮತ್ತು ಮಹಾರಾಷ್ಟ್ರದ ರಾಜ್ಯಪಾಲರಾಗಿ ದೇಶದ ಗೌರವ ಹೆಚ್ಚಿಸಿದ್ದು, ಅವರ ಆದರ್ಶ ನಾಯಕತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಪ್ರತಿಮೆ ಸ್ಥಾಪನೆ ಸೂಕ್ತ ಎಂದು ಉಲ್ಲೇಖಿಸಲಾಗಿದೆ.