
ಬೆಂಗಳೂರಿನ ಹಡ್ಸನ್ ವೃತ್ತದಿಂದ ಚಾಲುಕ್ಯ ವೃತ್ತದವರೆಗಿನ ಪ್ರಮುಖ ರಸ್ತೆಯಲ್ಲಿ ಬೀದಿ ದೀಪಗಳು ಕಾರ್ಯನಿರ್ವಹಿಸದಿರುವುದನ್ನು ಗಮನಿಸಿದ ಸಚಿವ ಕೃಷ್ಣಬೈರೇಗೌಡ, ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಿದ್ದಾರೆ.
ಆಗಸ್ಟ್ 28ರಂದು ಸಚಿವರು ನಡೆಸಿದ ಪರಿವೀಕ್ಷಣೆಯಲ್ಲಿ ಒಟ್ಟು 222 ದೀಪಗಳ ಪೈಕಿ 140 ಎಲ್‌ಇಡಿ ದೀಪಗಳು ಉರಿಯುತ್ತಿಲ್ಲ ಎಂಬುದು ದೃಢಪಟ್ಟಿದ್ದು, ಇದು ನಿರ್ವಹಣೆಯ ವೈಫಲ್ಯವನ್ನು ಎತ್ತಿ ತೋರಿಸಿದೆ.
ಈ ಹಿಂದೆ ಆಗಸ್ಟ್ 04ರಂದು ನಡೆದ ಸಭೆಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ದೀಪಗಳ ನಿರ್ವಹಣೆಯನ್ನು ಸರಿಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.