
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಬಿಎಂಟಿಸಿ ಬಸ್ಗಳ ಸರಣಿ ಅಪಘಾತಗಳಿಗೆ ಬ್ರೇಕ್ ಹಾಕಲು ಜಾಗೃತಗೊಂಡಿರುವ ನಿಗಮವು, ತನ್ನ 19 ಸಾವಿರಕ್ಕೂ ಹೆಚ್ಚು ಚಾಲಕರಿಗೆ ರಸ್ತೆ ಸುರಕ್ಷತೆಯ ವಿಶೇಷ ತರಬೇತಿ ನೀಡಲು ಮುಂದಾಗಿದೆ.
ಕಳೆದ 17 ವರ್ಷಗಳಲ್ಲಿ (2008-09 ರಿಂದ 2026-27ರ ವರೆಗೆ) ಬಿಎಂಟಿಸಿ ಬಸ್ಗಳಿಂದ ಒಟ್ಟು 5,864 ಅಪಘಾತಗಳು ಸಂಭವಿಸಿದ್ದು, ಇವುಗಳಲ್ಲಿ 1,142 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆತಂಕಕಾರಿ ಅಂಕಿ-ಅಂಶಗಳು ಬಹಿರಂಗಪಡಿಸಿವೆ.
ನಗರದ 50 ಬಿಎಂಟಿಸಿ ಡಿಪೋಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರಿಗೆ ಮೊದಲ ಹಂತದಲ್ಲಿ ಡಿಪೋಗಳಲ್ಲಿ ಹಾಗೂ ಎರಡನೇ ಹಂತದಲ್ಲಿ ವಡ್ಡರಹಳ್ಳಿಯ ತರಬೇತಿ ಕೇಂದ್ರದಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳಿಂದ ತರಬೇತಿ ಆರಂಭಿಸಲಾಗಿದೆ.